ಶ್ರೀಯಿಂದ ದಿವಂಗತದ ಕಡೆಗೆ
ಶ್ರೀಯಿಂದ ದಿವಂಗತದ ಕಡೆಗೆ
ಹುಟ್ಟು ಮತ್ತು ಸಾವು ದೇವರು ಕೊಡುವ ವರ ಅಂದರೂ ತಪ್ಪಲ್ಲ. ಇವರೆಡರ ನಡುವೆ ಮನುಷ್ಯನು ಎಷ್ಟು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಾಡಿರುತ್ತಾನೆ ಅದರ ಸೂಚನೆಯಲ್ಲಿ ಸ್ವರ್ಗವೋ...ನರಕವೋ... ಎಂದು ಭೂಮಿಯಲ್ಲಿಯೆ ನಿಶ್ಚಯವಾಗುತ್ತದೆ.
ಭಗವದ್ಗೀತೆಯಲ್ಲಿ ಹೇಳಿದಂತೆ ಮನುಷ್ಯ ಜನ್ಮವೂ ಇಂದು ನಮ್ಮದಾಗಿದೆ ಅಂದರೆ ಅದು ಪುಣ್ಯದ ಕೆಲಸದಿಂದ ಲಭಿಸಿದ ಫಲ.
ದಿವಂಗತ ಕುಶಾಲಪ್ಪ ಮತ್ತು ದಿವಂಗತ ಚಿನ್ನಮ್ಮ ಇವರ ಪ್ರಥಮ ಪುತ್ರನಾದ ರೂಪಾನಂದ ಗೌಡ ಕೆ ಇವರು ದಿನಾಂಕ:22/03/1954 ರಂದು ಜನಿಸಿ, ತನ್ನ ಸಹೋದರ ಮತ್ತು ಸಹೋದರಿಯರಿಗೆ ಹಿರಿಯ ಮಾರ್ಗದರ್ಶಿಯಾಗಿದ್ದವರು ಅವರೇ ನನ್ನ ತಾತ. ದಿನಾಂಕ: 22/04/1977 ರಂದು ದಿವಂಗತ ಹುಕ್ರಪ್ಪ ಮತ್ತು ದಿವಂಗತ ಅಕ್ಕಯ್ಯ ಇವರ ಪ್ರಥಮ ಪುತ್ರಿಯಾದ ಮೀನಾಕ್ಷಿ ಇವರನ್ನು ಮದುವೆಯಾಗಿ ದಾಂಪತ್ಯ ಜೀವನವನ್ನು ಸುಖವಾಗಿ ಸ್ವೀಕರಿಸಿದವರು. ಸುಪುತ್ರಿ ಮತ್ತು ಮೂರು ಜನ ಗಂಡು ಮಕ್ಕಳನ್ನು ಹೊಂದಿದ್ದು ಅವರ ಏಳಿಗೆಗೆ,ಜೀವನಕ್ಕೆ ಮತ್ತು ಬದುಕಿಗೆ ಬೆನ್ನೆಲುಬಾಗಿ ನಿಂತವರು ನನ್ನ ತಾತ.
ಇನ್ನೂ ಕೇವಲ ನೆನಪೊಂದೆ ಮನಸ್ಸಿನಲ್ಲಿ ಅಚ್ಚು ಉಳಿದ ವ್ಯಕ್ತಿತ್ವ. ಬಿಳಿ ವಸ್ತ್ರದ ಪಂಚೆ ಮತ್ತು ಅಂಗಿ, ಕೊರಳ ಪಟ್ಟಿಗೆ ಧರಿಸಿರುವ ಕರವಸ್ತ್ರ, ಎಡದ ಕೈಯಲ್ಲಿ ದೊಡ್ಡ ಕನ್ನಡಿಯ ವಾಚ್, ಮುಖದಿಂದ ತಪ್ಪದ ಕನ್ನಡಕ, ಎತ್ತರವಾಗಿದ್ದು ಗಟ್ಟಿ-ಮುಟ್ಟದ ಶರೀರ. ತೋಟಕ್ಕೆ -ಪೇಟೆಗೆ ಹೋಗಿ ಬಂದರು ಬಾಯಾರಿಕೆ ನೀಗುವ ಮೊದಲು ಕೈ-ಕಾಲು, ಮುಖ ಸ್ವಚ್ಚವಾಗಿ ತೊಳೆದ ನಂತರವೇ ಎಲ್ಲಾ ಕೆಲಸ. ಅನ್ನ, ಹಿಟ್ಟಿನ ಜೊತೆಗೆ ತಿನ್ನುವಾಗ ತುಂಬಾ ಸಾಂಬಾರ್ ಬೇಕು; ಜೊತೆಗೆ ಖಾರ ಇದ್ದರೆ ಅಚ್ಚುಮೆಚ್ಚು, ಸಪ್ಪೆಯಾದ ಕಣ್ಣ ಚಹಾ ಹಂಡೆಯಲ್ಲಿ ಕೊಟ್ಟರು ಬೇಡ ಎಂದು ಹೇಳಿದ್ದು ನೆನಪೇ ಇಲ್ಲ.
ಪರಿಚಯ ಇಲ್ಲದವರನ್ನೂ ಪರಿಚಯಿಸಿ ಮಾತನಾಡುವ ವ್ಯಕ್ತಿತ್ವ ನನ್ನ ಅಜ್ಜನದು. ಮನೆಯವರು, ನೆಂಟರಿಷ್ಟರು, ಕುಟುಂಬದವರು, ತಿಳಿದವರು ಎಲ್ಲವರೂ ಇವರ ಆಸ್ತಿಯೇ. ಅಕ್ಟೋಬರ್ 6, 2025 ನಮ್ಮೊಂದಿಗೆ ನೀವು ಇನ್ನಿಲ್ಲ, ನೆನಪೊಂದೆ ಎಂದಾಗ ಆಘಾತ, ಬೇಸರ,ನಮ್ಮ ಶಕ್ತಿಯನ್ನೇ ಕಳೆದುಕೊಂಡೆವು ಅನ್ನಿಸತೊಡಗಿತು.
ತನ್ನ ಎಸ್.ಎಸ್.ಎಲ್.ಸಿ. ವ್ಯಾಸಂಗ ಮುಗಿದ ಕೂಡಲೇ ಸೈನಿಕ ಹುದ್ದೆಗೆ ಉದ್ಯೋಗದ ಅರ್ಜಿ ಬಂದಾಗ ಅವರ ತಾತ ತಿರಸ್ಕರಿಸಿ ಸಹಿ ಹಾಕದೆ ಕನಸಿನ ದಾರಿಯನ್ನು ಮುಚ್ಚಿ ಇಂದಿಗೂ ಕೇವಲ ಕನಸಾಗಿಯೇ ಉಳಿದು ಬಿಟ್ಟಿತು.
ಮಾತು ಎಷ್ಟೇ ನೇರವಾಗಿದ್ದರೂ, ಜೋರಾಗಿ ಮತ್ತು ನಿಲುವು ಇಲ್ಲದ ಮಾತು ಇವರದಾಗಿತ್ತು. ಇದೆಲ್ಲ ಒಂದು ಕಡೆಯಾದರೆ ಪುರಾಣ ಗ್ರಂಥಗಳಾದ ಭಗವದ್ಗೀತೆ, ಮಹಾಭಾರತ, ರಾಮಾಯಣ ಮತ್ತು ಇನ್ನಿತರ ಕಥೆಗಳ ಸಂಪೂರ್ಣ ಜ್ಞಾನ ಭಂಡಾರವು ನನ್ನ ಅಜ್ಜನದು. ಮಹಾಗಣಪತಿ ದೇವರ ಕೃಪೆಯಿಂದ ದೇವರ ಕೆಲಸವೆಂದು ಒಂದು ರೂಪಾಯಿ ಹಣಕ್ಕೂ ಆಸೆ ಪಡದೆ ಹಸ್ತರೇಖೆ, ಜ್ಯೋತಿಷ್ಯ, ಪಂಚಾಗ, ವಾಸ್ತು ಶಿಲ್ಪವನ್ನು ನೋಡುವುದು ಇವರ ಕಲೆಯಾಗಿತ್ತು. ಇಂಗ್ಲಿಷ್ ಓದುದರಲ್ಲಿಯೂ, ಲೆಕ್ಕ- ಗಣಿತದಲ್ಲಿಯೂ ಚಾಣಕ್ಯ, ದಾನ - ಧರ್ಮ ಎನ್ನುವ ವಿಷಯದಲ್ಲಿ ಕರ್ಣನೇ ಎಂದರು ತಪ್ಪಲ್ಲ. ಮನೆಗೆ ಬಂದವರಿಗೆ ಒಂದು ಲೋಟ ನೀರಿನಲ್ಲಿ ಆಗಲಿ, ಒಂದು ಮುಷ್ಟಿ ಅನ್ನದಲ್ಲಿ ಆಗಲಿ ಯಾವುದೇ ವಂಚನೆ ಇಲ್ಲದೆ ಬಂದವರ ಬಾಯಾರಿಕೆ ಮತ್ತು ಹಸಿವನ್ನು ನೀಗಿಸುತ್ತಿದ್ದರು ನನ್ನ ಅಜ್ಜ.
ನನ್ನ ಹುಟ್ಟಿದ ದಿನದಿಂದ ಹಿಡಿದು ಜೀವನದಲ್ಲಿ ಉದ್ಯೋಗ ಪಥವನ್ನು ಕೈ ಹಿಡಿಯುವ ತನಕ ಹೆತ್ತವರಂತೆ ಬೆನ್ನೆಲುಬಾಗಿ ನಿಂತವರು, ಅಮಾವಾಸ್ಯೆಯ ದಿನದಂದು ನನ್ನ ಜನನವಾದರೂ ನನ್ನೊಂದಿಗೆ ಇದ್ದವರು, ಅಂಗನವಾಡಿಗೆ ಕರೆದುಕೊಂಡು ಹೋಗುವಾಗ ಕಾಲಿಗೆ ದಣಿವನ್ನು ಕೊಡದೆ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೋದವರು ನನ್ನ ಅಜ್ಜ. ರಜೆಯಲ್ಲಿ ಅಜ್ಜನ ಮನೆಗೆ ಹೋದಾಗ ಮಗ್ಗಿ ಕಲಿಸಿಕೊಡುತ್ತಿದ್ದರು, ನಾನು ಬರೆಯುವ ಕಥೆ- ಕವಿತೆಗಳಿಗೂ ಸಲಹೆಗಾರರಾಗಿದ್ದರು, ರಜೆಯಲ್ಲಿ ಬಂದಾಗ ಮತ್ತೆ ಹಿಂತಿರುಗಿ ಹೋಗುವ ಸನ್ನಿವೇಶ ಬಂದಾಗ ರಸ್ತೆಯ ಬಳಿಗೆ ಬಂದು ಬಸ್ಸಿಗೆ ಹತ್ತಿಸಿ ಜಾಗ್ರತೆ ಎಂದು ಹೇಳಿ ನಮ್ಮನ್ನು ಕಳುಹಿಸಿಕೊಡುತ್ತಿದ್ದರು. ಡಿಗ್ರಿ ಆಗಿ ಉದ್ಯೋಗ ಎಂದು ಸೋತಾಗ ಕೈ ಹಿಡಿದು ಮುನ್ನಡೆಸಿ ಎಂ.ಕಾಂ. ಮಾಡು ಎಂದು ಮಾರ್ಗದರ್ಶನ ನೀಡಿದವರು, ಈ ವರುಷ ಉದ್ಯೋಗ ಸಿಕ್ಕಿದಾಗ ನನ್ನಕ್ಕಿಂತ ಹೆಚ್ಚು ಖುಷಿ ಪಟ್ಟವರು ನನ್ನ ಅಜ್ಜ.
ನಮ್ಮ ಮನೆಗೆ ಬಂದಾಗ ನನಗೆ ಮಾತ್ರವಲ್ಲ, ನನ್ನ ಗೆಳತಿಯರಿಗೂ ಮಾರ್ಗದರ್ಶನ ನೀಡುತ್ತಿದ್ದರು, ನನ್ನ ತಮ್ಮನು ಜನಿಸಿದಾಗ ಖುಷಿ ಪಟ್ಟವರು, ದೊಡ್ಡ ಮಗನ ಮಗ ಜನಿಸಿದಾಗ ಸಿಗರೇಟು, ಬೀಡಿ ಇದರ ಚಟವನ್ನು ದೂರ ತಳ್ಳಿದವರು. ಪೇಟೆಗೆ ಹೋದಾಗ ತನ್ನ ಮೊಮ್ಮಕ್ಕಳಿಗೆ ಬಿಸ್ಕೆಟ್, ಚಾಕಲೇಟುಗಳ ರಾಶಿಯನ್ನು ಕೈಗೆ ಕೊಟ್ಟವರು ನನ್ನ ತಾತ.
ತನ್ನ ಅಳಿಯನನ್ನು ಮಗನಂತೆ, ಸೊಸೆಯಂದಿರನ್ನು ಮಗಳಂತೆ ಕಂಡವರು. ನನ್ನ ತಂದೆಯ ಗೆಳೆಯರು ಅವರು ನಂಬುವ ದೇವರಿಗಿಂತ ಹೆಚ್ಚಾಗಿ ನಂಬಿದ್ದು ನನ್ನ ಅಜ್ಜನ ಜ್ಯೋತಿಷ್ಯ ಮತ್ತು ಪಂಚಾಗವನ್ನು, ಜೊತೆಗೆ ದೇವರಂತೆ ಪೂಜಿಸುತ್ತಿದ್ದರು.
ಕರ್ನಾಟಕ ರಾಜ್ಯ ಸರಕಾರದಿಂದ ಸಾಕ್ಷರತೆ ಅಂದೋಲನ ಕಾರ್ಯಕ್ರಮವು ಜಾರಿಗೆ ಬಂದಾಗ ವಿದ್ಯಾಭ್ಯಾಸ ಇಲ್ಲದ ಜನಮಂದಿಗಳಿಗೆ ಸಹಿ ಹಾಕುವುದನ್ನು ಕಲಿಸಿಕೊಟ್ಟಿದ್ದರು. ಕೋಲ್ಚಾರು ಶಾಲೆಯ ಪ್ರಾರಂಭ ದಿನಗಳಲ್ಲಿ ಆರು ತಿಂಗಳ ಕಾಲ ಉಚಿತ ಶಿಕ್ಷಣವನ್ನು ಬೋಧಿಸಿದ್ದರು.
ಎಷ್ಟೇ ರೊಚ್ಚಿಗೆದ್ದರು, ಸಿಟ್ಟಿನಲ್ಲಿ ಕೂಡಿದ್ದರೂ ತನ್ನ ಧರ್ಮಪತ್ನಿಯನ್ನು ಕೊನೆಯ ತನಕ ಪ್ರೀತಿಯಿಂದ ಕಾಣುತ್ತಿದ್ದರು. ಅಜ್ಜಿಯು ಅನಾರೋಗ್ಯಕ್ಕೆ ಒಳಗಾಗಿ, ನಡೆಯಲಾಗದೆ ಇದ್ದ ಸಂದರ್ಭದಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಹೇಳಬಹುದು. ಇದೇ ವರುಷ ಜೂನ್ ತಿಂಗಳಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತಿದ್ದು ಇಂದು ನಮ್ಮೆಲ್ಲರಿಂದ ಕಣ್ಮರೆಯಾಗಿದ್ದರೆ. ದೇಹವು ಪಂಚ ಭೂತಗಳಲ್ಲಿ ಸೇರಿದ್ದರು ಅವರ ತತ್ವ ಪಾಠ , ನೀತಿ, ದಾನ-ಧರ್ಮ, ಒಳ್ಳೆಯತನ ಎಂದಿಗೂ ಮಾಸದೆ ಅಚ್ಚಾಗಿ ಉಳಿದು ಬಿಡುತ್ತವೆ.
ಕೊನೆಯಬಾರಿ ಕಂಡಾಗ ಏನೂ ಮಾತನಾಡದೆ, ಅರ್ಧ ಮುಚ್ಚಿದ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದು, ಎಷ್ಟೇ ಕಿರುಚಾಡಿದರೂ, ಕೂಗಿದರೂ ಏನೂ ಅಲುಗಾಡದೆ ಸ್ತಬ್ಧವಾಗಿ ನಿಂತಾಗ ನೆನಪಾದದ್ದು ಅವರು ಕಲಿಸಿಕೊಟ್ಟ ಪಾಠವು, ಯಾರೇ ತೀರಿ ಹೋಗಲಿ ಕೊನೆಗೆ ನಾನೇ ಹೋದರು ಎಲ್ಲ ಕಾರ್ಯವನ್ನು ಎಡಗೈಲ್ಲಿ ಮಾಡತಕ್ಕದ್ದು, ಅದುವೇ ಸಂಪ್ರದಾಯ. ಆದರೆ ಮೊನ್ನೆ ಅವರ ಮುಖವನ್ನು ನೋಡಿದಾಗ ಇಂದೇ ಕೊನೆಯ ಬಾರಿ ನೋಡುವುದು, ಕಲಿಸಿದ ಪಾಠಗಳನ್ನು ಮೆಲುಕು ಹಾಕುತ್ತಾ ಬಲಗೈಯಲ್ಲಿಯೇ ತುಳಸಿ ದಳದಿಂದ ಅಕ್ಷತೆ-ನೀರನ್ನು ಬಿಟ್ಟೆನು.
ಇಂದು ಶ್ರೀ ರೂಪಾನಂದ ಗೌಡ ಕೆ ಯಿಂದ ದಿವಂಗತ ರೂಪಾನಂದ ಗೌಡ ಕೆ ಎಂಬ ಕಾಲಚಕ್ರಕ್ಕೆ ಉರುಳಿಬಿಟ್ಟಿತು. ಇಂದಿಗೂ ಮತ್ತು ಇನ್ನು ಮುಂದೆಗೂ ನಮ್ಮ ಜೊತೆಯಲ್ಲೇ ಇದ್ದಾರೆ ಎನ್ನುವ ಭಾವನೆಯಲ್ಲಿ ನಾವೆಲ್ಲರೂ ಬದುಕಬೇಕಾಗಿದೆ.
ಮೂಕವಾದವು!
ಅಪ್ಪ- ಅಮ್ಮನ ನಗುವಿನಲ್ಲಿ ಬಂದೆ ನೀನು
ಮಕ್ಕಳ ಕಣ್ಣೀರಿನಲ್ಲಿ ಮಾಯವಾದೆ ನೀನು...
ಮುಚ್ಚಿದ ಆ ಕಣ್ಣುಗಳಲ್ಲಿ ಕಣ್ಣೀರು ಸುರಿಯದು
ನಿಂತ ಉಸಿರಾಟದಲ್ಲಿ ಮಾತುಗಳು ಆಡದೆ ಮೂಕವಾದವು
ಕೈ-ಕಾಲು ಬೆರಳುಗಳು ಅಲುಗಾಡದೆ ನಿಂತವು
ಎಲ್ಲರ ಮನಸ್ಸಿನಲ್ಲಿ ದುಃಖದ ಭಾವನೆ ವ್ಯಕ್ತವಾಗುವು...
ಇಷ್ಟು ದಿನದ ಪಯಣದಲ್ಲಿ ತಿಳಿದಿರಲಿಲ್ಲ ನಿನ್ನನ್ನು
ಕೈ ಜಾರುತ್ತಿದೆ ಎಂದಾಗ ರಕ್ಷಿಸಿಕೊಳ್ಳಲು ಹೊರಟಿರುವರು ನಿನ್ನನ್ನು
ಈಗ , ಎಲ್ಲರೂ ಹೋಲಿಸಿದರು ನಿರ್ಜೀವಕ್ಕೆ ನಿನ್ನನ್ನು
ಮರೆಯಲಾಗದು ನಿನ್ನ ಆ ನೆನಪುಗಳನ್ನು...
ನೋಡಲಾಗದು ಮನೆಮಂದಿಗಳ ಕಿರುಚಾಟವು
ಚಿರನಿದ್ರೆಗೆ ಜಾರಿದೆ ನಿನ್ನ ಈ ಪ್ರಾಣವು
ಕೊನೆಗೆ ನಿನ್ನನ್ನು ಭಸ್ಮ ಮಾಡಿತ್ತು ಸುಡುವ ಜ್ವಾಲೆಯು
ಮೂಕವಾಗಿ ನಿಲ್ಲಬೇಕಾಗಿದೆ ನಿನ್ನ ಈ ಕುಟುಂಬವು...
ತಾತ ನಿಮ್ಮ ಆತ್ಮಕ್ಕೆ ಚಿರಶಾಂತಿಃ ಸಿಗಲಿ ಎಂದು ಆ ಶ್ರೀಹರಿಯಲ್ಲಿ ಪ್ರಾರ್ಥಿಸುತ್ತೇನೆ.
ಸಿಂಚನ ಕೆ. ಎನ್
ಕುತ್ಯಾಳ, ಕುಡ್ನಕಜೆ
Comments
Post a Comment