ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!

     ನೆನಪು ಸವಿಯಾಗಿರಲಿ ಕಹಿಯಾಗಿರಲಿ ಪಯಣದ ಪಥದಲ್ಲಿ ಮರೆಯಾಗದಂತೆ ಉಳಿಯುವಂತದ್ದು. ನನ್ನ ಜೀವನದಲ್ಲಿ ಎಷ್ಟೋ ನಡೆದು ಹೋದ ಘಟನೆಗಳಿರಬಹುದು. ಆದರೆ, ಈ ಸವಿನೆನಪು ಮರೆತರು ಮತ್ತೆ ಮತ್ತೆ ಮರುಕಳಿಸಿ, ಜೀವನದ ಖುಷಿಯ ಪಯಣದಲ್ಲಿ ನನ್ನೊಂದಿಗೆ ಸಾಗುತ್ತದೆ.

     ಕನಸು ಕಂಡವರು ಯಾರಿಲ್ಲ ಹೇಳಿ, ಟೀಚರ್ ಆಗುವ ಕನಸು ಹೆಚ್ಚಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ, ಅಮ್ಮನ ಚೂಡಿದಾರ್ ಶಾಲನ್ನು ಸುತ್ತಿ ತನ್ನಷ್ಟಕ್ಕೆ ಪಾಠ ಮಾಡಿ ತನ್ನದೇ ಕಲ್ಪನಾ ಲೋಕದಲ್ಲಿ ಮುಳುಗಿ ನಂತರ ಅಂಕಗಳ ಮೂಲಕ ಕನಸು ಬೇರೆ ದಾರಿಯನ್ನು ಸೇರಿದ್ದು ಇದೆ.

     ಇದೆಲ್ಲ ಒಂದು ಕಡೆಯಾದರೆ,
ನನ್ನ ಈ ಸವಿ ನೆನಪಿನ ಪಯಣಕ್ಕೆ ಸಾಕ್ಷಿಯಾದದ್ದು ಸರಕಾರಿ ಪದವಿಪೂರ್ವ ಕಾಲೇಜು, ಗುತ್ತಿಗಾರು. ಈ ಸ್ನಾತಕೋತರ ಅವಧಿಯಲ್ಲಿ ನಮ್ಮ ವಿದ್ಯಾ ಸಂಸ್ಥೆಯಿಂದ ಇಂಟರ್ನ್ಶಿಪ್ ಮಾಡುವ ಅವಕಾಶ ಸಿಕ್ಕಿದಾಗ ಉಪನ್ಯಾಸಕರಾಗಿ 15 ದಿನಗಳ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೆ. ಇದರ ಬಗ್ಗೆ ನಾನು ನನ್ನ ಪ್ರೊಫೆಸರ್ ಬಳಿ ತರಗತಿಯ ವೇಳೆ ಎಷ್ಟೋ ಸಲ ಚರ್ಚಿಸಿದ್ದುಂಟು. ಇದರ ಜೊತೆಗೆ ಎಲ್ಲಿಯಾದರೂ ಅವಕಾಶ ಸಿಗದೇ ಇದ್ದಾಗ, ಬೇರೆ ಎಲ್ಲಿಯಾದರೂ ಕೆಲಸ ಮಾಡುವ ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದೆ ಕೂಡ. ಒಂದು ಆಯ್ಕೆ ಗುತ್ತಿಗಾರು ಕಾಲೇಜು ಆದರೆ, ಇನ್ನೊಂದೆಡೆ ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ್ರಹ್ಮಣ್ಯ ಎಂದುಕೊಂಡಿದ್ದೆ. ನನ್ನ ತಮ್ಮ ಅಲ್ಲಿ ಈಗಿನ ವಿದ್ಯಾರ್ಥಿ ಆದಕಾರಣ ನಾನು ಬರಲು ಅಷ್ಟು ಇಚ್ಛಿಸಿರಲಿಲ್ಲ. ನನ್ನ ಮೊದಲನೆಯ ಆಯ್ಕೆ ಅಂತಿಮವಾಗಿ ನಿರ್ಣಯವಾಯಿತು.

     ಮೊದಲೇ ನನ್ನ ಚಿಕ್ಕಮ್ಮನ ಮಗ(ಆದೇಶ್)ನ ಬಳಿ, ತಮ್ಮನ ಸ್ನೇಹಿತ(ವೈಭವ್)ನ ಬಳಿ ಮತ್ತು ಸಮೀಕ್ಷನ ಬಳಿ ಹಂಚಿಕೊಂಡಿದ್ದೆ. ಅವಕಾಶ ಸಿಕ್ಕರೆ ನಾನು ನಿಮಗೆ ಪಾಠ ಮಾಡಲು ಬರುತ್ತೇನೆ ಎಂದು ಹೇಳಿದ್ದೆ. ಈ ಆಯ್ಕೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗದ) ಮೊದಲಿನ ಮುಖ್ಯೋಪಾಧ್ಯಾಯರಾದ ಶ್ರೀಯುತ ನೆಲ್ಸನ್ ಸರ್ ಇವರ ಬಳಿ ಹೇಳಿದಾಗ ಅನುಮತಿ ಕೇಳಿ ನೋಡುತ್ತೇನೆ ಎಂದು ಹೇಳಿ ಪ್ರಾಂಶುಪಾಲರ ಬಳಿಯು ನೀವು ಒಮ್ಮೆ ಅನುಮತಿಯನ್ನು ಕೇಳಿ ಎಂದಿದ್ದರು. ಸರ್, ನಿಜವಾಗಿಯೂ ನನ್ನ ತಮ್ಮ ಅದೃಷ್ಟವಂತ ನಿಮ್ಮಂತಹ ಗುರುಗಳನ್ನು ಪಡೆದಿದ್ದಕ್ಕೆ. ಯಾವತ್ತು ನಿಮಗೆ ನಾನು ಆಭಾರಿಯಾಗಿರುತ್ತೇನೆ.

     ಕಾಲೇಜಿಗೆ ಹೋದಾಗ ಯಾರ ಪರಿಚಯವೂ ಇರಲಿಲ್ಲ. 30 ಜುಲೈ 2024 ಬೆಳಗ್ಗಿನ 11:15ರ ಈ ಸಮಯಕ್ಕೆ ಹೋದಾಗ ಪ್ರಾಂಶುಪಾಲರ ಮುಖ ಪರಿಚಯವಿಲ್ಲದೆ ಮನಸ್ಸಿನಲ್ಲಿ ತಳಮಳ ಭಾವನೆಯಿಂದ ಉಪನ್ಯಾಸಕರ ಕೊಠಡಿ ಬಳಿ ತಲುಪಿದೆ. ಮೇಡಂನ ಬಳಿ ಪ್ರಿನ್ಸಿಪಾಲ್ ಮೇಡಂ ಎಂದು ಕೇಳಿದೆ. ಅವರು ಏನು ವಿಷಯ ಎಂದು ಕೇಳಿದಾಗ ಇಂಟರ್ನ್ಶಿಪ್ ಗೆ ಅನುಮತಿ ಕೇಳಲು ಬಂದಿದ್ದೇನೆ ಎಂದೆನು. ಅನುಮತಿಯನ್ನು ನೀಡಿ ಯಾವಾಗದಿಂದ ಬರುತ್ತೀಯ ಎಂದು ಕೇಳಿದರು. ಜೊತೆಗೆ ನಮ್ಮ ದೂರದ ಸಂಬಂಧಿಕರಾದ ದೀಕ್ಷಾ ಮಾಡಬಾಗಿಲು (ದೀಕ್ಷಾಕ್ಕ) ಅವರು ಮೇಡಂ ಬಳಿ ಇವಳು ನನ್ನ ಕಸಿನ್ ಎಂದಾಗ ಮನಸಲ್ಲೇ ತುಂಬಾ ಸಂತೋಷದ ಭಾವನೆ ಮೊಳಗಿದರು ಸುಮ್ಮನೆ ನಿಂತೆ ಇದ್ದೆ. ದೀಕ್ಷಾ ಮೇಡಂ ಮತ್ತು ದೀಪ್ತಿ ಮೇಡಂ ಬಳಿ ಇವಳಿಗೆ ಯಾವ ಪಾಠ ಮಾಡಬೇಕೆಂದು ಹೇಳಿಕೊಡಿ ಎಂದರು. ಒಂದು ಕಡೆ ಮೇಡಂ ಅವರು ಅನುಮತಿ ಕೊಟ್ಟರು ಎನ್ನುವ ಖುಷಿಯಾದರೆ; ದೀಕ್ಷಾಕ್ಕ ಕಸಿನ್ ಎಂದರಲ್ಲ ಎನ್ನುವ ಖುಷಿಯ ಭಾವನೆ ಇನ್ನೊಂದೆಡೆ. ಇನ್ನು ಅಮ್ಮನ ಬಳಿ, ತಂದೆಯ ಬಳಿ ಮತ್ತು ಮಾವನ ಬಳಿಯೂ ಹಂಚಿಕೊಂಡೆ.

    ದಿನಾಂಕ, 5 ಅಗಸ್ಟ್ 2024 ರಿಂದ ನನ್ನ ಇಂಟರ್ನ್ಶಿಪ್ ದಿನಗಳು ಶುರುವಾಯಿತು. ಮೇಡಂನವರು ವ್ಯವಹಾರ ಅಧ್ಯಯನ (Business Studies) ಪಾಠದ ಮೇಲೆ ಪ್ರಥಮ ಪಿಯುಸಿ ಅವರಿಗೆ ವ್ಯವಹಾರ ಸೇವೆಗಳು(Business Services) ಮತ್ತು ದ್ವಿತೀಯ ಪಿಯುಸಿ ಅವರಿಗೆ ಸಿಬ್ಬಂದಿ ನಿರ್ವಹಣೆ (Staffing) ಈ ಎರಡು ಅಧ್ಯಾಯವು ನನಗೆ ಪಾಠ ಮಾಡಲು ಸಿಕ್ಕಿತು. ಮೊದಲ ದಿನ ಕೇವಲ ಪೀಠಿಕೆಯನ್ನು ಮಾಡಿದೆ. ಜೊತೆಗೆ ಯಾವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬಳಿ ಹೆಸರನ್ನು ಕೇಳಿರಲಿಲ್ಲ. ಪ್ರಥಮ ಪಿಯಸಿಯಲ್ಲಿ ತಮ್ಮನ ಸ್ನೇಹಿತರು ಇದ್ದ ಕಾರಣ ಅವರ ಬಳಿಯೇ ಪ್ರಶ್ನೆಯನ್ನು ಕೇಳುತ್ತಾ ಹೋದೆ. ಆದರೆ ದ್ವಿತೀಯ ಪಿಯುಸಿಯಲ್ಲಿ ತಮ್ಮನ ಗೆಳೆಯನಾದ ರೋಶನ್ ಇದ್ದ ಕಾರಣ ಅವರ ಹೆಸರನ್ನು ಕರೆಯುವ ಪ್ರಸಂಗವು ನಡೆಯಿತು.

      ನಾನು ಕಳೆದ ದಿನಗಳು 12 ದಿನಗಳಾದರೂ, ನೆನಪು ಸ್ಮರಣೀಯ. ಮೊದಲಿಗೆ ನನಗೆ ಕನ್ನಡದಲ್ಲಿ ಪಾಠ ಮಾಡಲು ಕಷ್ಟವಾದರೂ ನಂತರ ಸ್ವಲ್ಪಮಟ್ಟಿಗೆ ರೂಢಿಸಿಕೊಂಡೆ. ಯಾಕೆಂದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೂಡಾ ಇದ್ದರು. ಪಾಠವನ್ನು ಮಾಡುವಾಗ ಉದಾಹರಣೆಯ ಮೂಲಕ ಮೂರರಿಂದ ನಾಲ್ಕು ಸಲ ಹೇಳುತ್ತಿದ್ದೆ. ಕೆಲವರಿಗೆ ಅದು ಕಿರಿಕಿರಿ ಅನಿಸಿದರು ಅವರಿಗೆ ಅರ್ಥವಾಗಬೇಕೆಂಬ ಉದ್ದೇಶದಿಂದ ಪುನರಾವರ್ತನೆ ಮಾಡುತ್ತಿದ್ದೆ. ನಂತರ ಮಕ್ಕಳ ಹೆಸರನ್ನು ಕೇಳಿ ಕಲಿತು ಪಾಠದ ಮಧ್ಯದಲ್ಲಿ ಅವರ ಹೆಸರನ್ನು ಕರೆದು ಪಾಠದ ಕಡೆ ಗಮನವಿದೆಯೊ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಿದ್ದೆ. ಕೊನೆಯ ಎರಡು ದಿನಗಳ ಪಾಠ ಸ್ವಲ್ಪ ವೇಗವಾಗಿ ಮುಗಿಸಿದರು ಪಾಠ ಅರ್ಥಾಗಿದೆ ಎನ್ನುವ ವಿದ್ಯಾರ್ಥಿಗಳು ಬರೆದ ಪ್ರತಿಕ್ರಿಯೆಯನ್ನು ಓದಿದಾಗ ಬಹಳ ಖುಷಿಯಾಯಿತು. ಜೊತೆಗೆ ಮತ್ತೊಮ್ಮೆ ಬನ್ನಿ ಮೇಡಂ ಪಾಠ ಮಾಡಲು ಎಂದು ಬರೆದದ್ದನ್ನು ಕಂಡು ತೃಪ್ತಳಾದೆ.

     ಮೊದಲನೆಯ ದಿನ ಮನಸ್ಸಿನಲ್ಲಿ ತಳವಳಗೊಂಡರು, ಆದರೆ ಕೊನೆಯ ದಿನ ಮನಸ್ಸಿನಲ್ಲಿ ತುಂಬಾ ಬಾವುಕಾಳಾದೆ. ನಾಳೆಯಿಂದ ನಮಸ್ತೆ ಎಂದು ವಿದ್ಯಾರ್ಥಿಗಳ ಧ್ವನಿ ಕೇಳುವುದಿಲ್ಲ . ಜೊತೆಗೆ ಹೊಸ ಪರಿಚಯವಾದವರು ತುಂಬಾ ಆಪ್ತರಾದವರು ದಿವ್ಯ ಮೇಡಂ ಇವರು. ಇವರೊಂದಿಗೆ ಕಾದಂಬರಿ, ಚಲನಚಿತ್ರ, ಜೀವನ ಹೀಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೇವು. ತುಂಬಾ ಸ್ನೇಹದ ಭಾವನೆಯಿಂದ ನಮ್ಮಿಬ್ಬರ ಸ್ನೇಹ ಬೆಳೆಯಿತು ಎಂದರು ತಪ್ಪಲ್ಲ. ಇನ್ನು ಮನಸ್ಸಿಗೆ ಇಷ್ಟಕರವಾದ ವಿಷಯವೇನೆಂದರೆ, ಮೇಡಂನ ಬಳಿಯೇ ನನಗೆ ಸ್ಥಳವನ್ನು ಕಲ್ಪಿಸಿದರು. ಜೊತೆಗೆ ದೀಕ್ಷಕ್ಕನ ಬಳಿಯೂ ತುಂಬಾ ಅನ್ಯೋನ್ಯತೆ ಭಾವನೆಯಿಂದ ಕೂಡಿದ್ದು ಸ್ವಂತ ಅಕ್ಕ ಎನ್ನುವ ಭಾವನೆ ಮೂಡಿತ್ತು. ನಾವಿಬ್ಬರೂ ಕೂಡ ಎಷ್ಟೋ ವಿಷಯಗಳನ್ನು ಚರ್ಚಿಸಿದ್ದುಂಟು. ಇನ್ನೂ ಮೇಡಂ- ಸರ್ ಅವರು ಎಲ್ಲರೂ ತುಂಬಾ ಬೆಂಬಲವನ್ನು ನೀಡಿದರು.

      ಇನ್ನೊಂದು ಭಾವುಕಥೆಯ ಘಟನೆ ಏನೆಂದರೆ, ನೆಲ್ಸನ್ ಸರ್ ಇವರ ವರ್ಗಾವಣೆಯ ಉಪಹಾರದ ಕಾರ್ಯಕ್ರಮವು ನಡೆದಿತ್ತು. ಉಪನ್ಯಾಸಕರಿಗೂ ಶಿಕ್ಷಕರಿಗೂ ನೆನಪಿನ ಕಾಣಿಕೆಯನ್ನು ನೀಡಿದರು. ಊಟ ಮುಗಿದ ಮೇಲೆ ನಾವು ಸಿಬ್ಬಂದಿಯ ಕೊಠಡಿಯಲ್ಲಿ ಮಾತಿನ ಲೋಕದಲ್ಲಿ ಮುಳುಗಿದಾಗ ಸರ್ ಬಂದು ನನಗೂ ನೆನಪಿನ ಕಾಣಿಕೆಯನ್ನು ನೀಡಿದಾಗ ಒಂದು ಕಡೆ ಆಶ್ಚರ್ಯ; ಇನ್ನೊಂದು ಕಡೆ ಮಾತನಾಡದೆ ಮೌನಿಯಾಗಿ ನಿಂತುಬಿಟ್ಟಿದೆ. ನಿಜಕ್ಕೂ ನನ್ನ ತಮ್ಮ ಮತ್ತು ಅವರ ವಿದ್ಯಾರ್ಥಿಗಳೆಲ್ಲ ಅದೃಷ್ಟವಂತರು ಅಂತ ಹೇಳಲು ನಾನು ಇಚ್ಚಿಸುತ್ತೇನೆ.

     ಇನ್ನೂ ಹೊಸ ಮುಖಗಳ ಪರಿಚಯವೆಂದರೆ ಗಣಿತ ಅಧ್ಯಾಪಕರಾದ ಉಮೇಶ್ ಸರ್, ಕರಕೌಶಲ ಅಧ್ಯಾಪಕರಾದ ಚೂಡಮಣಿ ಮೇಡಂ ಹಾಗೆ ಕೊನೆಯ ದಿನದಂದು ಪರಿಚಯರಾದವರು ವಿಜ್ಞಾನ ಅಧ್ಯಾಪಕರಾದ ಸಾವಿತ್ರಿ ಮೇಡಂ ಇವರು. ಸಿಂಚನಕ್ಕ ಮೊದಲೇ ಪರಿಚಯವಿದ್ದಿದ್ದರಿಂದ ಆ ಸ್ನೇಹದ ಭಾವ ಹಾಗೆಯೇ ಉಳಿದಿತ್ತು.

     ನಾನು ಗುತ್ತಿಗಾರು ಕಾಲೇಜಿನಲ್ಲಿ ಕಲಿತ ವಿಷಯವೇನೆಂದರೆ, ಒಂದು ಕಾರ್ಯಕ್ರಮದ ಮೊದಲು ನಡೆಯುವ ಸಭೆ ಇದರಲ್ಲಿ ಕಾರ್ಯಕ್ರಮದ ತಯಾರಿ ಮತ್ತೊಂದು ಸಭೆಯಲ್ಲಿ ಕಾರ್ಯಕ್ರಮದ ತಯಾರಿಯಾ ಪರಿಶೀಲನೆಯ ಬಗ್ಗೆ. ಇದರ ಜೊತೆ ಅವರೊಂದಿಗೆ ನನಗೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿಕೊಳ್ಳುವ ಭಾಗ್ಯ ಲಭಿಸಿತು. ಜೊತೆಗೆ ಸ್ಟೇಜನ್ನು ಅಲಂಕರಿಸಲು ನಾನು ಭಾಗವಹಿಸಿದ್ದು ಕೂಡ ನನಗೆ ತುಂಬಾ ಖುಷಿಯಾಯಿತು.

     ನಿಜವಾಗಿಯೂ ಉಪನ್ಯಾಸಕರು/ ಅಧ್ಯಾಪಕರಾದರೆ ಕೇವಲ ಕಾಲೇಜಿನಲ್ಲಿ ಮಾತ್ರವಲ್ಲದೆ ಹೊರಗಡೆಯೂ ಎಲ್ಲವರು ಗೌರವದಿಂದ ಕಾಣುವರು. ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಕಾಲೇಜ್ ವಿಭಾಗದ ವಿದ್ಯಾರ್ಥಿಗಳು ನಮಸ್ತೆ ಎನ್ನುವುದು ಈವಾಗಲು ಕಿವಿಗೆ ಕೇಳಿಸುತ್ತಿದೆ. ಜೊತೆಗೆ ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಹುಟ್ಟು ಹಬ್ಬದ ದಿವಸ ಸಲುವಾಗಿ ಬಂದು ವಿದ್ಯಾರ್ಥಿಗಳು ಸಿಹಿ ತಿಂಡಿಗಳನ್ನು ನೀಡುತ್ತಿದ್ದರು. ತರಗತಿಯಲ್ಲಿ ಹೇಳಿದ್ದೆ ಒಂದು ಆಟ ಆಡಿಸುತ್ತೇನೆ ಎಂದು ಕೇವಲ ನಾನು 12 ದಿವಸ ತೆಗೆದುಕೊಂಡ ಕಾರಣ ಸಮಯದ ಅಭಾವ ಆದಕಾರಣ ಆಟ ಆಡಿಸಲಿಲ್ಲ. ಇನ್ನು ಅನುಭವದ ಪ್ರತಿಕ್ರಿಯೆಯನ್ನು ಓದಿದಾಗ ಪಾಠ ಮಾಡಿದ ಶೈಲಿಯು ಜೊತೆಗೆ ಪಾಠ ಅರ್ಥವಾಗಿದೆ ಎಂದು ಬರೆದನ್ನು ಕಂಡು ಖುಷಿಯಾಯಿತು. ಜೊತೆಗೆ ಪಾಠ ಮಾಡಲು ಬನ್ನಿ ಎಂದು ಬರೆದಿತ್ತು. ಇದರೊಂದಿಗೆ ಪ್ರಾಂಶುಪಾಲರು ಮೇಡಂ ಕೂಡ ಅವಕಾಶ ಸಿಕ್ಕಿದಾಗ ಬನ್ನಿ ಎಂದದ್ದು ನನಗೆ ಪ್ರೇರಣೆಯ ಮಾತಾಯಿತು. 

      ಕೊನೆಯ ದಿನದಂದು ನಡೆದ ಆ ಕಾರ್ಯಕ್ರಮವು ನಿಜಕ್ಕೂ ಅಚ್ಚರಿಯಾಗಿ ಮನಸ್ಸಿನಲ್ಲಿ ಹೊಸ ಚಿಮ್ಮುವನ್ನು ಬೆಳಗಿಸುತ್ತದೆ. ಒರ್ವ ವ್ಯಕ್ತಿಗೆ ಹೇಗೆ ಬೀಳ್ಕೊಡುಗೆಯ ಸಮಾರಂಭ ಆಗುತ್ತದೆಯೋ, ಅದೇ ರೀತಿಯಲ್ಲಿ ನನ್ನನ್ನು ಉಪಚಾರ ಮಾಡಿದ್ದು ನಿಜವಾಗಿಯೂ ನನಗೆ ಅಚ್ಚರಿಯ ಸಂಗತಿ. ಜೊತೆಗೆ ನೆನಪು ಮರುಕಳಿಸುವಂತೆ ಅಚ್ಚಳಿಯದೆ ಉಳಿಯುವಂತೆ ನೀಡಿದ್ದು ಆ ನೆನಪಿನ ಸ್ಮರಣಿಕೆ, ಎಲ್ಲರ ಪ್ರೀತಿ ವಿಶೇಷವಾಗಿ ನನಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯವನ್ನು ನೀಡಿದ್ದು ಇವೆಲ್ಲವೂ ವ್ಯಕ್ತಪಡಿಸಲಾಗದ ಭಾವನೆ. ಇದರೊಂದಿಗೆ ವಿದ್ಯಾರ್ಥಿ ಚಿರಾಜ್ ನೀಡಿದ ಆದಿಯೋಗಿ ಮೂರ್ತಿ ಮತ್ತು ಸಮೀಕ್ಷ ನೀಡಿದ ಡೈರಿ ಮಿಲ್ಕ್. ಈ 12 ದಿನಗಳಲ್ಲಿ ನಾನು ಹೊಸ ವಿಷಯಗಳನ್ನು ಕಲಿತೆ, ನನ್ನೊಂದಿಗೆ ವಿದ್ಯಾರ್ಥಿಗಳು ನನ್ನಿಂದ ಹೊಸ ವಿಷಯವನ್ನು ಕಲಿತರು ಎನ್ನುವ ಭಾವನೆ ಮೂಡಿತು. ಇವೆಲ್ಲವೂ ನನ್ನ ಜೀವನದ ಪಯಣದಲ್ಲಿ ಸವಿ ನೆನಪಾಗಿ ಕೂಡಿಟ್ಟ ನೆನಪಾಗಿರುತ್ತದೆ...


-ಸಿಂಚನ ಕೆ.ಎನ್.
ಕುತ್ಯಾಳ, ಕುಡ್ನಕಜೆ ಮನೆ.

Comments

  1. ಒಳ್ಳೆಯ ಅನುಭವ ಅಲ್ವಾ...

    ReplyDelete
  2. ಸೂಪರ್‌ಯ... ಲಾಯ್ಕಿ ಉಟ್ಟು ಅನುಭವ... ಇನ್ನೂ ಜಾಸ್ತಿ ಜಾಸ್ತಿ ಬರಿತಾ ಇರ್...‌ ಬಿ.ಎಡ್‌ ಮಾಡಿ ಅಲ್ಲೇ ಸ್ಥಿರ ಪಾಠಕ್ಕೆ ಸೇರುವಂತಾಗಲಿಯ...

    ReplyDelete

Post a Comment

Popular posts from this blog

ವಿಮರ್ಶೆ ಕಥಾನ - ಕವಲು

ಕಾಡ್ ಮಾವಿನ ಹಣ್ಣಿನ ಗತ್ತ್..!